भारत

Blog single photo

ಸ್ವಾತಂತ್ರೋತ್ಸವ ಅಮೃತ ಮಹೋತ್ಸವ : 75 ವಾರಗಳ ಕಾರ್ಯಕ್ರಮ

11/03/2021

ನವದೆಹಲಿ, ಮಾ.11: ಸ್ವಾತಂತ್ರೋತ್ಸವದ ಅಮೃತ ಮಹೋತ್ಸವ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಸಬರಮತಿ ಆಶ್ರಮದಲ್ಲಿ ನಾಳೆ ಚಾಲನೆ ನೀಡಲಿದ್ದಾರೆ.

ದೇಶದಕ್ಕೆ ಸ್ವಾತಂತ್ರ್ಯ ಬಂದು 2022ರ ಆಗಸ್ಟ್ 15ಕ್ಕೆ 75 ವರ್ಷಗಳು ತುಂಬುತ್ತಿರುವ ಹಿನ್ನೆಲೆಯಲ್ಲಿ ಜನ-ಭಾಗಿದಾರಿ ಹಾಗೂ ಜನ-ಉತ್ಸವದ 75 ವಾರಗಳ ಕಾರ್ಯಕ್ರಮಗಳನ್ನು ಪ್ರಧಾನಿ ಉದ್ಘಾಟಿಸಲಿದ್ದಾರೆ.

ಅಹಮದಾಬಾದ್‍ನ ಸಬರಮತಿ ಆಶ್ರಮದಿಂದ ಸ್ವಾತಂತ್ರೋತ್ಸವದ ಜಾಥಾ ಪಾದಯಾತ್ರೆಗೆ ಚಾಲನೆ ನೀಡಲಿರುವ ಪ್ರಧಾನಮಂತ್ರಿ ಅವರು ಆ ಬಳಿಕ ಅಜಾದಿ ಕ ಅಮೃತ ಮಹೋತ್ಸವ ಕಾರ್ಯಕ್ರಮಕ್ಕೆ ವಿಧ್ಯುಕ್ತ ಚಾಲನೆ ನೀಡಲಿದ್ದಾರೆ.

ಅಹಮದಾಬಾದ್‍ನ ಸಬರಮತಿ ಆಶ್ರಮದಿಂದ ನೌಸಾರಿಯ ದಂಡಿವರೆಗೆ ನಡೆಯಲಿರುವ 241 ಮೈಲಿ ದೂರದ ಪಾದಯಾತ್ರೆಯಲ್ಲಿ 81 ಪಾದಯಾತ್ರಿಗಳು ಪಾಲ್ಗೊಳ್ಳಲಿದ್ದಾರೆ.

25 ದಿನಗಳ ಈ ಪಾದಯಾತ್ರೆ ಏಪ್ರಿಲ್ 5 ರಂದು ಕೊನೆಗೊಳ್ಳಲಿದೆ. ಸ್ವಾತಂತ್ರೋತ್ಸವ ಜಾಥಾ ಸಮಯದಲ್ಲಿ ವಿವಿಧ ಸಂಘನೆಗಳು ಪಾಲ್ಗೊಳ್ಳಲಿವೆ. ಮೊದಲ 75 ಕಿಲೋಮೀಟರ್ ತನಕ ಕೇಂದ್ರ ಸಂಸ್ಕೃತಿ ಸಚಿವ ಪ್ರಹ್ಲಾದ್ ಸಿಂಗ್ ಪಟೇಲ್ ಹೆಜ್ಜೆ ಹಾಕಲಿದ್ದಾರೆ.

ಸ್ವಾತಂತ್ರೋತ್ಸವದ 75ನೇ ವರ್ಷಾಚರಣೆ ಸಂದರ್ಭದಲ್ಲಿ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಪ್ರಧಾನಿ ಇದೇ ವೇಳೆ ಚಾಲನೆ ನೀಡಲಿದ್ದಾರೆ. ಸಬರಮತಿ ಆಶ್ರಮದಲ್ಲಿ ಜನರನ್ನು ಉದ್ದೇಶಿಸಿ ಅವರು ಮಾತನಾಡಲಿದ್ದಾರೆ.

ಸ್ವಾತಂತ್ರೋತ್ಸವದ ಅಮೃತ ಮಹೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸುವ ಸಲುವಾಗಿ ವಿವಿಧ ಸಮಿತಿಗಳನ್ನು ರಚನೆ ಮಾಡಲಾಗಿದೆ. ರಾಷ್ಟ್ರೀಯ ಅನುಷ್ಠಾನ ಸಮಿತಿಯ ನೇತೃತ್ವವನ್ನು ಗೃಹ ಸಚಿವ ಅಮಿತ್ ಶಾ ವಹಿಸಿದ್ದಾರೆ.

ನಾಳೆಯಿಂದ 75 ವಾರಗಳ ಕಾಲ ದೇಶದ ಉದ್ದಗಲಕ್ಕೂ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ಕೇಂದ್ರ ಸಂಸ್ಕೃತಿ ಸಚಿವಾಲಯ, ಯುವಜನ ಸೇವಾ ಕ್ರೀಡಾ ಸಚಿವಾಲಯ, ಭಾರತೀಯ ಸರ್ವೇಕ್ಷಣಾ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳು ಈ ಕಾರ್ಯಕ್ರಮದ ಜವಾಬ್ದಾರಿ ಹೊತ್ತುಕೊಂಡಿದೆ.


 
Top